ಕರ್ನಾಟಕ ರಾಜ್ಯ ನಾಗರಿಕ ವಿಮಾನಯಾನ ನೀತಿ–2026ಕ್ಕೆ ಸಚಿವ ಸಂಪುಟ ಅನುಮೋದನೆ

1 ನಿಮಿಷ ಓದು · ನವೀಕರಿಸಲಾಗಿದೆ 7 ವೀಕ್ಷಣೆ
WhatsApp
ಕರ್ನಾಟಕ ರಾಜ್ಯ ನಾಗರಿಕ ವಿಮಾನಯಾನ ನೀತಿ–2026ಕ್ಕೆ ಸಚಿವ ಸಂಪುಟ ಅನುಮೋದನೆ

ಬೆಂಗಳೂರು: ಕರ್ನಾಟಕ ರಾಜ್ಯ ನಾಗರಿಕ ವಿಮಾನಯಾನ ನೀತಿ–2026ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ರಾಜ್ಯದಲ್ಲಿ ವಿಮಾನಯಾನ ಸಂಪರ್ಕವನ್ನು ವಿಸ್ತರಿಸುವುದು, ಪ್ರಾದೇಶಿಕ ವಿಮಾನಯಾನವನ್ನು ಉತ್ತೇಜಿಸುವುದು ಹಾಗೂ ವಿಮಾನ ನಿಲ್ದಾಣಗಳು ಮತ್ತು ಇತರ ವಿಮಾನಯಾನ ಮೂಲಸೌಕರ್ಯಗಳ ಅಭಿವೃದ್ಧಿಗೆ ವೇಗ ಹೆಚ್ಚಿಸುವುದು ಇದರ ಉದ್ದೇಶವಾಗಿದೆ

ಕೇಂದ್ರ ಸರ್ಕಾರದ ರಾಷ್ಟ್ರೀಯ ನಾಗರಿಕ ವಿಮಾನಯಾನ ನೀತಿ–2016ಕ್ಕೆ ಅನುಗುಣವಾಗಿ ರೂಪಿಸಿರುವ ಈ ನೀತಿಯು ರಾಜ್ಯದಲ್ಲಿ ವಿಮಾನಯಾನ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ನೀತಿ ಚೌಕಟ್ಟನ್ನು ಒದಗಿಸಲಿದೆ. ವಿಮಾನಯಾನ ಸಂಪರ್ಕ ಕಡಿಮೆ ಇರುವ ಹಾಗೂ ಸೇವೆಗಳಿಲ್ಲದ ಪ್ರದೇಶಗಳಿಗೆ ವಿಮಾನ ಸಂಪರ್ಕ ಕಲ್ಪಿಸುವುದರ ಜೊತೆಗೆ, ಪ್ರಾದೇಶಿಕ ವಿಮಾನಯಾನ ಸೇವೆಗಳನ್ನು ಉತ್ತೇಜಿಸಲಿದೆ.

ಈ ನೀತಿಯಡಿ ಪ್ರಾದೇಶಿಕ ಸಂಪರ್ಕ ಯೋಜನೆ (Regional Connectivity Scheme–ಉಡಾನ್), ಕಾರ್ಯಸಾಧ್ಯತೆಯ ಅಂತರ ನಿಧಿ (Viability Gap Funding–VGF) ಹಾಗೂ ಅಗತ್ಯ ಹಣಕಾಸು ನೆರವಿನ ಮೂಲಕ ವಿಮಾನಯಾನ ಸೇವೆಗಳ ವಿಸ್ತರಣೆಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ

ರಾಜ್ಯದ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ವಿಮಾನ ನಿಲ್ದಾಣಗಳು, ವಿಮಾನ ಪಟ್ಟಿಗಳು (Airstrips), ಹೆಲಿಪೋರ್ಟ್‌ಗಳು ಮತ್ತು ಜಲವಿಮಾನ ನಿಲ್ದಾಣಗಳ (Water Aerodromes) ಅಭಿವೃದ್ಧಿಗೂ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಈ ಮೂಲಸೌಕರ್ಯಗಳ ಅಭಿವೃದ್ಧಿಯ ಮೂಲಕ ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸುವುದು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಹಾಗೂ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸುವುದು ಎಂದು ಅಂದಾಜಿಸಲಾಗಿದೆ.

ವಿಮಾನಯಾನ ಸೇವೆಗಳ ಅನುಷ್ಠಾನ, ಹಣಕಾಸು ನೆರವು, ಕಾರ್ಯಾಚರಣೆ ಮತ್ತು ಸಂಬಂಧಿತ ಪ್ರಕ್ರಿಯೆಗಳನ್ನು ವ್ಯವಸ್ಥಿತಗೊಳಿಸಲು ಅಗತ್ಯ ಮಾರ್ಗಸೂಚಿಗಳು ಹಾಗೂ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ರೂಪಿಸುವುದಕ್ಕೂ ನೀತಿ ಅವಕಾಶ ಕಲ್ಪಿಸುತ್ತದೆ.

ಈ ನೀತಿಯ ಅನುಷ್ಠಾನದಿಂದ ರಾಜ್ಯದ ವಿವಿಧ ಭಾಗಗಳಿಗೆ ವಿಮಾನ ಸಂಪರ್ಕ ಸುಧಾರಿಸುವುದರ ಜೊತೆಗೆ, ಪ್ರಾದೇಶಿಕ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ.

ಜಾಹೀರಾತು
AdSense · in-feed

ಸಂಬಂಧಿತ ಲೇಖನಗಳು